ನೆಲದಾವರೆ  -
	ಸೀತೆ ಹೂಗಳ (ಆರ್ಕಿಡ್) ಜಾತಿಗೆ ಸೇರಿದ ಏಕದಳ ಸಸ್ಯ (ಹೆಬನೇರಿಯ). ಇದರ ಹೂಕಾಂಡ (ಸ್ಕೇಪ್) ಭೂಮಿಯೊಳಗೆ ಹುದುಗಿರುವ ಗೆಡ್ಡೆಯಿಂದ ನೇರವಾಗಿ ಹೊರಬಂದು ತಾವರೆಯಂಥ ಆಕರ್ಷಕವಾದ ಹೂಗಳನ್ನು ಬಿಡುವುದರಿಂದ ಇದಕ್ಕೆ ನೆಲದಾವರೆ ಎಂಬ ಹೆಸರು ಬಂದಿದೆ. ನೆಲದಾವರೆಯ ಕಾಂಡ ಭೂಮಿಯ ಅಡಿಯಲ್ಲಿ ಹುದುಗಿರು ಗೆಡ್ಡೆ ರೀತಿಯದು. ಪ್ರತಿವರ್ಷ ಹೊಸ ಹೊಸ ಎಲೆಗಳನ್ನು ರೂಪಿಸುತ್ತ ಬೆಳೆಯುತ್ತದೆ. ವರ್ಷದಲ್ಲಿ ಮೊದಲು ಈ ಗಿಡ ಹೊಸ ಎಲೆಗಳನ್ನು ಚಾಚಿ ಆಹಾರ ಶೇಖರಿಸಿಡುತ್ತದೆ. ಬಳಿಕ ಎಲೆಗಳು ಮುರುಟಿ ಹೋಗಿ ಹೂಕಾಂಡ ಹೊರಬೆಳೆದು ಹೂಗಳನ್ನು ಅರಳಿಸುತ್ತದೆ. ಅನಂತರ ಫಲ ಬಿಟ್ಟು ಬೀಜ ಸಿಡಿದು ಬೀಜ ಪ್ರಸಾರವಾದ ಮೇಲೆ ಪುನಃ ಹೊಸ ಎಲೆಗಳು ರಚಿತಗೊಳ್ಳುತ್ತವೆ. ಇದು ನೆಲದಾವರೆಯ ಜೀವನ ಚಕ್ರ.

	ನೆಲದಾವರೆಯಲ್ಲಿ ಸುಮಾರು 750 ಪ್ರಭೇದಗಳಿವೆಯೆಂದು ಅಂದಾಜುಮಾಡಲಾಗಿದೆ. ಇವು ಬ್ರೆಜಿûಲ್, ಆಫ್ರಿಕ ಮತ್ತಿತರ ಉಷ್ಣವಲಯದ ದೇಶಗಳಲ್ಲಿ ಹೆಚ್ಚಾಗಿ ಪ್ರಸರಿಸಿವೆ. ಸಾಮಾನ್ಯವಾಗಿ ಇವು ಜೌಗು ಪ್ರದೇಶಗಳಲ್ಲಿ ಬೆಳೆಯುತ್ತವಲ್ಲದೆ, ಮರಗಳ ಕಾಂಡಗಳ ಮೇಲೆ, ಕಲ್ಲುಗಳ ಮೇಲೆಯೂ ಬೆಳೆಯುತ್ತದೆ. ಭಾರತದಲ್ಲಿ 500ಕ್ಕೂ ಹೆಚ್ಚು ಸಂಖ್ಯೆಯ ಪ್ರಭೇದಗಳಿವೆಯೆಂದು ಜೆ. ಡಿ. ಹುಕರ್ ಅಂದಾಜು ಮಾಡಿದ್ದಾನೆ. (1990). ದಕ್ಷಿಣ ಭಾರತದಲ್ಲಿ 28 ಪ್ರಬೇಧಗಳಿವೆಯನ್ನಲಾಗಿದೆ (ಗ್ಯಾಂಬಲ್ 1915). 1915 ರಿಂದೀಚೆಗೆ ಅನೇಕ ಹೊಸ ಹೊಸ ಪ್ರಭೇದಗಳನ್ನು ಪತ್ತೆಹಚ್ಚಲಾಗಿದೆ. ಬ್ಲಾಟರ್ ಎಂಬಾತ ಮುಂಬಯಿ ಭಾಗಕ್ಕೆ ಸೇರಿದ ನೆಲದಾವರೆಗಳನ್ನು ಕೂಲಂಕುಷವಾಗಿ ಅಭ್ಯಸಿಸಿದ್ದಾನೆ.

	ನೆಲದಾವರೆ ಹೂಗಳು ಹೆಚ್ಚಾಗಿ ಬಿಳಿಬಣ್ಣದವು. ಹಸಿರು, ಹಳದಿ, ನಸುಗೆಂಪು ಬಣ್ಣದ ಹೂಗಳೂ ಇಲ್ಲದಿಲ್ಲ. ಹೂಗಳಿಗಿರುವ ಉದ್ದನೆಯ, ಕೊಳವೆಯಾಕಾರದ ಬಾಲ (ಸ್ಪರ್) ನೆಲದಾವರೆ ಹೂಗಳ ವಿಶೇಷಗುಣವಾಗಿದೆ. ಹೂಗಳು ಹೆಚ್ಚು ಸುವಾಸನೆಯಿಂದ ಕೂಡಿದ್ದು, ಸಾಧಾರಣವಾಗಿ ರಾತ್ರಿಯ ಕಾಲದಲ್ಲಿ ಅರಳುವುದೆಂದು ತಿಳಿದು ಬಂದಿದೆ. ನೀಳನಾಲಗೆಯ ನಿಶಾಚರಿ ಚಿಟ್ಟೆಗಳು ಪರಾಗಸ್ಪರ್ಶಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ.

	ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಸಿಗುವ ಪ್ರಭೇದಗಳಲ್ಲಿ ಮುಖ್ಯವಾದವು: ಹೆಬನೇರಿಯ ರೊಟಂಡಿಫ್ಲೋಲಿಯ, ಹೆ. ಗ್ರ್ಯಾಂಡಿಫೋರ, ಹೆ. ಹೇನಿಯಾನ, ಹೆ. ಲಾಂಜಿಕಾರ್ನಿಕ್ಯುಲೇಟ. ನೆಲದಾವರೆಗಳನ್ನು ಹೂದೋಟಗಳಲ್ಲಿಯೂ ಬೆಳೆಸುವುದುಂಟು. ಇವುಗಳಲ್ಲಿ ಮುಖ್ಯವಾದುವು ಹೆ. ರೋಡೊಕೈಲ, ಹೆ. ರೆಗ್ನಿಯರಿ ಮತ್ತು ಹೆ. ಕಾರ್ನಿಯ.
(ವಿ.ಬಿ.)
ಪರಿಷ್ಕರಣೆ : ಹರೀಶ್ ಭಟ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ